Click here to get directions and assistance from one of our representatives. For more information:

   
     Call 24 Hours: 9900571986

ಪ್ರಶಸ್ತಿ ಪುರಸ್ಕಾರಗಳು   arrow

ಕರ್ನಾಟಕ ಹೃದಯಶಿವನಿಂದ ಕನ್ನಡ ಡಿಂಡಿಮವನ್ನು ಬಾರಿಸಿದ ಕುವೆಂಪು ಅವರಿಗೆ ಸಂದ ಗೌರವ ಪುರಸ್ಕಾರಗಳು ಹತ್ತು ಹಲವಾರು. ಆಧುನಿಕ ಕಾಲದಲ್ಲೂ, ಸಮಕಾಲೀನ ಕೃತಿಯಾದ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು, ಕವಿಯ ಗೈರು ಹಾಜರಿಯಲ್ಲಿ ಆನೆಯ ಮೇಲೆ ಇಟ್ಟು ಮೆರವಣಿಗೆ ಮಾಡಿದ್ದು, ಕವಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕವಿಯ ಒಂದು ಕವನವನ್ನು ಕರ್ನಾಟಕದ ನಾಡಗೀತೆಯಾಗಿ, ಇನ್ನೊಂದು ಗೀತೆಯನ್ನು ಕರ್ನಾಟಕದ ರೈತಗೀತೆಯಾಗಿ ಸ್ವೀಕರಿಸಿರುವುದು ಅವರ ಸಾಹಿತ್ಯದ ಸಾರ್ವಕಾಲಿಕತೆಗೆ ಹಿಡಿದ ಮುನ್ನುಡಿ. ಕೀರ್ತಿ ಶನಿ ತೊಲಗಾಚೆ ಎಂದರೂ, ತಾವೆಂದೂ ಅದರ ಬೆನ್ಹತ್ತಿ ಹೋಗದಿದ್ದರೂ ಅವರನ್ನು ಹುಡುಕಿಕೊಂಡು ಪ್ರಶಸ್ತಿಗಳು ತಮಗೆ ತಾವೇ ಗೌರವ ಹೆಚ್ಚಿಸಿಕೊಂಡಿದ್ದು ಸುಳ್ಳಲ್ಲ. ಸ್ವತಃ ಕವಿ ಹೋಗಿ ಸ್ವೀಕರಿಸಿದ ಗೌರವ ಪ್ರಶಂಸೆಗಳಿಗಿಂತ ಅವರ ಗೈರುಹಾಜರಿಯಲ್ಲೇ ಸಂದವುಗಳೇ ಹೆಚ್ಚು ಎಂಬುದು, ಪ್ರಶಸ್ತಿಗಳ ಬಗ್ಗೆ ಕವಿಗಿದ್ದ ನಿರ್ವಿಕಾರ ಭಾವನೆಯ ದ್ಯೂತಕವಾಗಿದೆ. ಕೇವಲ ದಾಖಲಾತಿಗಾಗಿ ಅವುಗಳನ್ನು ಕೆಳಗಿನಂತೆ ಸಂಗ್ರಹಿಸಲಾಗಿದೆ.

1928     ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಕವಿಸಮ್ಮೇಳನದ ಅಧ್ಯಕ್ಷತೆ

1933     ಹುಬ್ಬಳ್ಳಿಯಲ್ಲಿ ನಡೆದ 19ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ

1955     ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ

1956     ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. ಪುರಸ್ಕಾರ

1956     ಮೈಸೂರಿನಲ್ಲಿ ನಡೆದ 38ನೆಯ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷ ಸ್ಥಾನ

1957     ಧಾರವಾಡದಲ್ಲಿ ನಡೆದ 39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

1958     ಭಾರತ ಸರ್ಕಾರದಿಂದ ಪದ್ಮಭೂಷಣ ಪುರಸ್ಕಾರ

1964     ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ ಪುರಸ್ಕಾರ

1966     ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಿಲಿಟ್ ಪುರಸ್ಕಾರ

1968     ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವ

1969     ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿಲಿಟ್ ಪುರಸ್ಕಾರ

1969    ಕಾನ್ಪುರ ವಿಶ್ವವಿದ್ಯಾನಿಲಯದಿಂದ ಗೌರವ ಡಿಲಿಟ್ ಪುರಸ್ಕಾರ

1974     ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣ

1979     ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ

1985    ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಗೌರವ ಡಿಲಿಟ್ ಪುರಸ್ಕಾರ

1985     ಪ್ರಥಮ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಗೌರವ

1986     ಕ್ಯಾಲಿಪೋರ್ನಿಯಾದ World Academy of Arts and Cultureನಿಂದ ಡಾಕ್ಟರ್ ಆಫ್ ಲಿಟರೇಚರ್ (Litt.D) ಪುರಸ್ಕಾರ

1986     ಶ್ರೀ ವಂಕಟೇಶ್ವರ ದೇವಸ್ಥಾನ ಪಿಟ್ಸ್ ಬರ್ಗ್ ಯು.ಎಸ್.ಎ. ಯಿಂದ ಗೌರವ ಸಮರ್ಪಣೆ

1987     ಕವಿಯ ಗೌರವಾರ್ಥ ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆ

1988     ಭಾರತ ಸರ್ಕಾರದಿಂದ ಪದ್ಮವಿಭೂಷಣ ಗೌರವ

1988     ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿಯ ಗೌರವ

1989     ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿಲಿಟ್ ಪುರಸ್ಕಾರ

1989    ಸ್ಯಾನ್ ಆಂಟೊನಿಯೋ ಅಮೆರಿಕಾ ಕುವೆಂಪು ಕನ್ನಡ ಕೂಟದ ವತಿಯಿಂದ ಗೌರವ ಸಮರ್ಪಣೆ

1992     ಕರ್ನಾಟಕ ಸರ್ಕಾರದಿಂದ ‘ಕರ್ನಾಟಕ ರತ್ನ’ ಗೌರವ

1992    ಶಿವಮೊಗ್ಗ ಕರ್ನಾಟಕ ಸಂಘದಿಂದ ಗೌರವ ಸಮರ್ಪಣೆ

1993   ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. ಪುರಸ್ಕಾರ

1994    ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಗೆ ಕವಿಯ ಗೌರವಾರ್ಥ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಂದು ಮರುನಾಮಕರಣ

ಮಂಗಳೂರು ಲಯನ್ಸ್ ಕ್ಲಬ್ ಅವರಿಂದ ಮರಣೋತ್ತರವಾಗಿ ಶತಮಾನದ ವ್ಯಕ್ತಿ ಗೌರವ ಸಮರ್ಪಣೆ