Click here to get directions and assistance from one of our representatives. For more information:

   
     Call 24 Hours: 9900571986

ಪ್ರಕಟಣೆಗಳು   arrow

ಕುವೆಂಪು ಸಾಹಿತ್ಯ ಪ್ರಸಾರದಲ್ಲಿ ನಿರತವಾಗಿರುವ ಪ್ರತಿಷ್ಠಾನವು ಪ್ರಕಟಣಾ ಕಾರ್ಯದಲ್ಲೂ ನಿರತವಾಗಿರುತ್ತದೆ. ಸಾಹಿತ್ಯಪ್ರಸಾರಕ್ಕೆ ಪುಸ್ತಕಗಳೇ ಸಾದನಗಳು! ಅಂತೆಯೇ ಪ್ರತಿಷ್ಠಾನವು ಹಲವಾರು ಪುಸ್ತಕಗಳನ್ನು ಪ್ರಕಟಿಸಿ, ಮಾರಾಟಕ್ಕೆ ವ್ಯವಸ್ಥೆ ಮಾಡಿರುತ್ತದೆ. ಪ್ರತಿಷ್ಠಾನದ ಪ್ರಕಟಣೆಗಳು ಕೆಳಗಿನಂತಿವೆ:


ಮಾಹಿತಿ ಪುಸ್ತಕಗಳು: ಆಸಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲೆಂದು ಆಗಾಗ್ಗೆ ಮಾಹಿತಿ ಪುಸ್ತಕಗಳನ್ನು ಪ್ರತಿಷ್ಠಾನ ಪ್ರಕಟಿಸುತ್ತಾ ಬಂದಿದೆ. ಪ್ರಸ್ತುತ 2017-18ರಲ್ಲಿ ಕೆಳಕಂಡ ಮಾಹಿತಿ ಪುಸ್ತಕಗಳನ್ನು ಪ್ರಕಟಿಸಲಾಗಿದೆ:

1. ಕುವೆಂಪು ಕುಪ್ಪಳಿ-ಕವಿಶೈಲ

2. Kuvempu’s Kuppali – Kavishaila

3. ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ಸ್ಮಾರಕ ಹಿರೇಕೊಡಿಗೆ


ಶ್ರೀಚಿತ್ರರಾಮಾಯಣ ದರ್ಶನಂ: ಕುವೆಂಪು ಅವರ ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದಿಂದ ಆಯ್ದ ಭಾಗಗಳಿಗೆ, ಕೌಶಿಕ್ ಅವರು ಚಿತ್ರಿಸಿರುವ ೫೭ ಕಲಾಕೃತಿಗಳನ್ನು ಈ ಸಂಪುಟ ಒಳಗೊಂಡಿರುತ್ತದೆ. ಆಯಾಯ ಚಿತ್ರಗಳಿಗೆ ಪ್ರೇರಕವಾಗಿರುವ ಶ್ರೀ ರಾಮಾಯಣ ದರ್ಶನಂ ಕಾವ್ಯಭಾಗ, ಅದರ ಜೊತೆಯಲ್ಲಿಯೇ ಗದ್ಯಾನುವಾದ ಮತ್ತು ಇಂಗ್ಲೀಷ್ ಅನುವಾದವನ್ನು ಸಹಾ ಮುದ್ರಿಸಿರುವುದರಿಂದ, ಕಲಾಕೃತಿಯನ್ನು ನೋಡುತ್ತಲೇ ಆಯಾಯ ಸಂದರ್ಭದ ಕಾವ್ಯಭಾಗವನ್ನು ಆಸ್ವಾದಿಸುವ ಅವಕಾಶ ಸಹೃದಯರಿಗೆ ಲಭಿಸುವಂತೆ ಶ್ರೀ ಕೌಶಿಕ್ ಈ ಕೃತಿಯನ್ನು ರೂಪಿಸಿರುತ್ತಾರೆ.


ಕುವೆಂಪು ಪುಷ್ಪಗೀತೆ (ಸಂ. ಡಾ. ಬಿ.ಆರ್. ಸತ್ಯನಾರಾಯಣ): ಆಗಸ್ಟ್ 15.2017 ಸ್ವಾತಂತ್ರ್ಯೋತ್ಸವ ಲಾಲ್’ಬಾಗ್ ಫಲ-ಪುಷ್ಪ ಪ್ರದರ್ಶನ ಸ್ಮರಣಾರ್ಥ ಕುವೆಂಪು ಸಾಹಿತ್ಯದಿಂದ ಹೂವುಗಳಿಗೆ ಸಂಬಂಧಿಸಿದ ಕವಿತೆಗಳನ್ನು ಆಯ್ದು ಸಂಕಲನವನ್ನಾಗಿ ಪ್ರಕಟಿಸಲಾಗಿದೆ. ಇದು ಹೂವು-ಹಸಿರು-ಹಣ್ಣು ಇವುಗಳಿಗೇ ಸಂಬಂಧಿಸಿ 54 ಕವಿತೆಗಳನ್ನು ಒಳಗೊಂಡಿದೆ. 04.08.2017ರಂದು ಗೌರವಾನ್ವಿತ ರಾಜ್ಯಪಾಲ ವಜೂಬಾಯಿ ವಾಲಾ ಅವರು ಲಾಲ್’ಬಾಗಿನಲ್ಲಿ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದರು.


ಕುವೆಂಪು ಸಮಗ್ರ ಸಾಹಿತ್ಯ ಮಾಲೆ‘ (2017 – ಎರಡನೆಯ ಆವೃತ್ತಿ): 2013ರಲ್ಲಿ, ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು 11 ಸಂಪುಟಗಳಲ್ಲಿ ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಹೊರತಂದು ಮಾರಾಟಕ್ಕೆ ವ್ಯವಸ್ಥೆ ಮಾಡಿತ್ತು. ಪ್ರಥಮಾವೃತ್ತಿಯ ಪ್ರತಿಗಳು ಮುಗಿದು ಹೋಗಿದ್ದರಿಂದ ಹಾಗೂ ಸಹೃದಯರಿಂದ ಪ್ರತಿಗಳಿಗಾಗಿ ಆಗಾಗ ಬೇಡಿಕೆಯೂ ಇದ್ದುದರಿಂದ ಎರಡನೆಯ ಆವೃತ್ತಿಯನ್ನು ಹೊರತರಲಾಗಿದೆ. ಈ ಬಾರಿ ಪ್ರತಿ ಸಂಪುಟಕ್ಕೂ ಸೂಚಿಗಳನ್ನು ತಯಾರಿಸಿ ಕೊಡಲಾಗಿರುವುದು ವಿಶೇಷ.


‘ಶ್ರೀ ರಾಮಾಯಣ ದರ್ಶನಂ’ ವಿಶೇಷ ಆವೃತ್ತಿ (2016): ಇದುವರೆಗೆ ಸುಮಾರು 15ಕ್ಕೂ ಹೆಚ್ಚು ಮುದ್ರಣಗೊಂಡಿರುವ ಈ ಮಹಾಕಾವ್ಯದ ವಿಶೇಷ ಆವೃತ್ತಿ ಇದಾಗಿದೆ. ಅದರ ವಿಶೇಷಗಳು ಕೆಳಕಂಡಂತಿವೆ

  • ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಕುರಿತಂತೆ, ಸಾಂಧರ್ಭಿಕವಾಗಿ ಸ್ವತಃ ಕವಿಯೇ ನೀಡಿರುವ ಅಭಿಪ್ರಾಯಗಳನ್ನು, ಟಿಪ್ಪಣಿಗಳನ್ನು ಲೇಖನ ರೂಪದಲ್ಲಿ ಸಂಪಾದಿಸಿಕೊಡಲಾಗಿದೆ.
  • ’ಶ್ರೀರಾಮಾಯಣ ದರ್ಶನಂ’ ಕುರಿತಂತೆ ಕವಿಯ ಸಮಕಾಲೀನರ, ನಂತರದ ಆಯ್ದ ವಿದ್ವಾಂಸರ ಅಭಿಪ್ರಾಯಗಳನ್ನು ದಾಖಲಿಸಿದೆ.
  • ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಆಯ್ದ ಪ್ರಸಂಗಗಳನ್ನು ಕುರಿತು ವಿವಿಧ ಕಲಾವಿದರು ರಚಿಸಿರುವ ವರ್ಣಕಲಾಕೃತಿಗಳನ್ನು ವಿವರಗಳೊಂದಿಗೆ ನೀಡಿದೆ.
  • ಕವಿಯ ಹಸ್ತಾಕ್ಷರದಲ್ಲಿರುವ ’ಶ್ರೀರಾಮಾಯಣ ದರ್ಶನಂ’ ಕಾವ್ಯದ ಕೆಲವು ಪುಟಗಳನ್ನು ಒದಗಿಸಿದೆ.
  • ’ಶ್ರೀರಾಮಾಯಣ ದರ್ಶನಂ’ ಕಾವ್ಯ, ಪ್ರಶಸ್ತಿ, ಅಭಿನಂದನಾ ಸಮಾರಂಭಗಳಿಗೆ ಸಂಬಂಧಪಟ್ಟಂತೆ ಕೆಲವು ವಿಶೇಷ ಚಿತ್ರಗಳ ಸಂಗ್ರಹ.
  • ’ಶ್ರೀರಾಮಾಯಣ ದರ್ಶನಂ’ ಕಾವ್ಯದ ಇದುವರೆಗಿನ ಅನುವಾದಗಳು ಹಾಗೂ ಅಧ್ಯಯನಗಳ ಆಯ್ದ ಕೃತಿಸೂಚಿ.
    ಇದುವರೆಗಿನ ಅನುವಾದಗಳ ಆಯ್ದ ಭಾಗವನ್ನು ಮೂಲಪಠ್ಯದೊಂದಿಗೆ ನೀಡಿದೆ.


ಕುವೆಂಪು ನಾಡು-ನುಡಿ ಮತ್ತು ವೈಚಾರಿಕತೆ (ಆಯ್ದ ಲೇಖನಗಳು) (2016): ಕುವೆಂಪು ಅವರ ವೈಚಾರಿಕ ಕೃತಿಗಳಿಂದ ನಾಡು-ನುಡಿ ಮತ್ತು ವೈಚಾರಿಕತೆಗೆ ಸಂಬಂಧಿಸಿದ ಲೇಕನಗಳ ಸಂಗ್ರಹ ಇದಾಗಿದೆ.


ಕುವೆಂಪು ಮಲೆನಾಡು (2015): ಕುವೆಂಪು ಅವರನ್ನು ರೂಪಿಸಿದ ಮಲೆನಾಡನ್ನು, ಅಲ್ಲಿನ ಪರಿಸರವನ್ನು ಕಟ್ಟಿಕೊಡುವ ಪುಸ್ತಕ ಇದು. ಪುಸ್ತಕವಿಡೀ ಬಹುವರ್ಣದಲ್ಲಿ ಮುದ್ರಿತವಾಗಿದ್ದು, ನೂರಾರು ಸಂದರ ಚಿತ್ರಗಳನ್ನು ಒಳಗೊಂಡಿದೆ. ಚಿತ್ರಗಳಿಗೆ ಪೂರಕವಾದ ಕುವೆಂಪು ಸಾಹಿತ್ಯದ ಸಾಲುಗಳಿವೆ. ಕೈಯಲ್ಲಿ ಹಿಡಿದು ಓದುವುದಕ್ಕೂ, ನೋಡುವುದಕ್ಕೂ ಅನುಕೂಲಕರ ಆಕಾರದಲ್ಲಿ ಪುಸ್ತಕ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.


 

ಕುವೆಂಪು ನುಡಿತೋರಣ (2015): ಕುವೆಂಪು ಅವರ ಸಮಗ್ರ ಸಾಹಿತ್ಯದಿಂದ ಆಯ್ದ ಸುಮಾರು 500ಕ್ಕೂ ಹೆಚ್ಚು ಸೂಕ್ತಿಗಳನ್ನು ಈ ಕಿಸೆಹೊತ್ತಿಗೆಯಲ್ಲಿ ಸಂಗ್ರಹಿಸಲಾಗಿದೆ. ವೈಚಾರಿಕತೆ, ದರ್ಶನ, ಸೃಜನಶೀಲತೆ, ಪ್ರಕೃತಿ, ರಾಷ್ಟ್ರೀಯತೆ, ನಾಡು ನುಡಿ, ಬದುಕು-ಜೀವನಪ್ರೀತಿ ಕುರಿತಾದ ಕುವೆಂಪು ದರ್ಶನದ ಕೈಗನ್ನಡಿಯಂತಿದೆ. ಅರಿವಿನ ಅರವಂಟಿಗೆಯಾದ ಈ ಕಿಸೆಹೊತ್ತಿಗೆಯ ಪುಟಗಳನ್ನು ತಿರುವಿಹಾಕಿದರೆ ಬ್ರಹ್ಮಾಂಡ ಬಾಯ್ದೆರೆಯುತ್ತದೆ, ಲೋಕಾನುಭವಜನ್ಯ ದರ್ಶನದೀಪ್ತಿ ಬೆಳಗುತ್ತದೆ, ಕುವೆಂಪುರವರ ಅಮೃತವಾಣಿ ಅನುರಣಿಸುತ್ತದೆ.


ಕುವೆಂಪು ಚಿತ್ರಸಂಪುಟ (2014): ಪ್ರಕೃತಿಯ ಮಡಿಲಲ್ಲಿ ಹುಟ್ಟಿ, ಪ್ರಕೃತಿಯಲ್ಲಿ ವಿಲೀನವಾಗುವವರೆಗು ರಸಋಷಿ ಕುವೆಂಪು ಇಟ್ಟ ಹೆಜ್ಜೆಗಳು, ನಡೆದು ಬಂದ ದಾರಿ, ಮಾಡಿದ ಸಾಧನೆಗಳು, ಏರಿದ ಎತ್ತರಗಳು, ಹೊಂದಿದ್ದ ಸಂಪರ್ಕಗಳು, ಪಡೆದ ಗೌರವ-ಸನ್ಮಾನ-ಪ್ರಶಸ್ತಿಗಳ ಮಣಿಹಾರ, ಕನ್ನಡ ಲೋಕ ಹರಿಸಿದ ಅಕ್ಕರೆಯ ಮಹಾಪೂರ- ಇವು ತುಂಬಿ ತುಳುಕುವ ಸ್ಮೃತಿರತ್ನ ಭಂಡಾರ ಈ ಚಿತ್ರಸಂಪುಟ. ಮಹಾಕವಿಯ ಬಾಳ ದೋಣಿಯ ಪಯಣದ ರನ್ನಗನ್ನಡಿಯಾದ ಈ ಚರಿತ್ರಾರ್ಹ ಚಿತ್ರಕೋಶಕ್ಕೆ ಇರುವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಆಯಾಮವನ್ನು ಉತ್ಪ್ರೇಕ್ಷಿಸುವ ಅಗತ್ಯವಿಲ್ಲ. ವಿವರಣೆ ಬಯಸದ ಸ್ವಯಂಪ್ರಭೆಯ ಇಂಥದೊಂದು ಅಪೂರ್ವ ಚಿತ್ರಸಂಪುಟ ಕನ್ನಡದಲ್ಲಿ ಇದೇ ಮೊದಲು ಎಂಬುದು ಇದರ ಹೆಗ್ಗಳಿಕೆ. ಸುಮಾರು 550 ಅಪೂರ್ವ ಚಿತ್ರಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.


 

ಕುವೆಂಪು ಸಮಗ್ರ ಸಾಹಿತ್ಯ ಮಾಲೆ‘ (2013): ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು 11 ಸಂಪುಟಗಳಲ್ಲಿ ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಹೊರತಂದು ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಈ ಹನ್ನೊಂದು ಸಂಪುಟಗಳು ಸಾಮೂಹಿಕ ಹೊಣೆಗಾರಿಕೆ ಪ್ರತಿಫಲವಾಗಿದೆ. ಈ ಯೋಜನೆಗೆ ಪ್ರತಿಷ್ಠಾನದ ಸಮಕಾರ್ಯದರ್ಶಿ ಶ್ರೀ ಕಡಿದಾಳ್ ಪ್ರಕಾಶ್ ನೇತೃತ್ವ ವಹಿಸಿದ್ದರು. ಈ ಸಂಪುಟಗಳನ್ನು ಕುರಿತು, ಶ್ರೀ ಹಂಪನಾ ಅವರು “ವಿಶ್ವಕವಿ ಕುವೆಂಪುರವರ ಈ ಸಮಗ್ರ ಸಾಹಿತ್ಯ ಕರಂಡಕ ಅಮೃತದ ಮಡು, ಮಿಂದವರು ಧನ್ಯರಾಗುವರು; ಜ್ಯೋತಿಯ ಖನಿ, ಹೊಕ್ಕವರು ಪ್ರಬುದ್ಧರಾಗುವರು” ಎಂದಿದ್ದಾರೆ. ಹನ್ನೊಂದು ಸಂಪುಟಗಳ ವಿವರ ಕೆಂಳಕಂಡತಿದೆ:


ಕುವೆಂಪು ವ್ಯಕ್ತಿ ಮತ್ತು ವ್ಯಕ್ತಿತ್ವ: ಕುವೆಂಪು ಅವರನ್ನು ಕನ್ನಡೇತರರಿಗೂ ಪರಿಚಯಿಸುವ ಉದ್ದೇಶದಿಂದ ರಚಿತವಾಗಿರುವ ಈ ಕೃತಿ ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು, ಗುಜರಾತಿ, ಉರ್ದು, ಇಂಗ್ಲಿಷ್, ಒರಿಯಾ ಮೊದಲಾದ ಭಾಷೆಗಳಲ್ಲಿ ಪ್ರಕಟವಾಗಿರುತ್ತದೆ.


ಶುಭಾಶಯ ಪತ್ರಗಳು: ಕುವೆಂಪು ಅವರ ಹಕ್ಕಿಗಳನ್ನು ಕುರಿತಾದ ಆಯ್ದ ಪದ್ಯಗಳಿಗೆ ಹೊಮದಿಕೆಯಾಗುವಂತೆ, ಪೂರ್ಣಚಂದ್ರ ತೇಜಸ್ವಿಯವರು ತೆಗೆದ ಹಕ್ಕಿ ಚಿತ್ರಗಳನ್ನು ಸಂಯೋಜಿಸಿ ಎಂಟು ಶುಭಾಶಯ ಪತ್ರಗಳನ್ನು ಸಿದ್ಧಪಡಿಸಲಾಗಿದೆ. ಕುಪ್ಪಳಿಗೆ ಭೇಟಿ ನೀಡುವ ಶಾಲಾಮಕ್ಕಳಿಗೆ ಇವು ತುಂಬಾ ಅಚ್ಚುಮೆಚ್ಚು!


ಶ್ರೀರಾಮಾಯಣ ದರ್ಶನಂ ಗಮಕ ವಾಚನ ಮತ್ತು ವ್ಯಾಖ್ಯಾನ (4 ಡಿ.ವಿ.ಡಿ.ಗಳ ಗುಚ್ಛ): ನಾಡಿನ ಹಲವಾರು ಗಮಕಿಗಳಿಂದ ಮಹಾಕಾವ್ಯದ ಭಾಗಗಳನ್ನು ಹಾಡಿಸಿ, ವಿದ್ವಾಂಸರುಗಳಿಂದ ಅದಕ್ಕೆ ವ್ಯಾಖ್ಯಾನ ಮಾಡಿಸಿ, ಧ್ವನಿ ಮುದ್ರಿಸಿ ಈ ಡಿ.ವಿ.ಡಿ.ಗಳನ್ನು ತಯಾರಿಸಲಾಗಿದೆ. ಜಾಗತಿಕ ಸಾಹಿತ್ಯ ಲೋಕದಲ್ಲಿ ಮಹಾಕಾವ್ಯವೊಂದನ್ನು ಹೀಗೆ ಧ್ವನಿಮುದ್ರಿಕೆಗೆ ಅಳವಡಿಸಿರುವುದು ಬಹುಶಃ ಇದೇ ಮೊದಲು. (ಗಮಕದ ತುಣುಕಿಗಾಗಿ ಇಲ್ಲಿ ಕ್ಲಿಕ್ಕಿಸಿ)


ಸಂಪರ್ಕ ಮಾಹಿತಿ ಪುಸ್ತಕ: ಶಿವಮೊಗ್ಗ ಜಿಲ್ಲೆಯ ಪ್ರವಾಸಿತಾಣಗಳ ಮಾಹಿತಿಯನ್ನೊಳಗೊಂಡ ಟೆಲಿಪೋನ್ ಡೈರಿ ಇದಾಗಿದೆ.


ಕುವೆಂಪು ಶತಮಾನೋತ್ತರ ನೋಟ: ಕುಪ್ಪಳಿಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ


ಗುರುವಿಭೂತಿಗೆ ನಮೋ : ಕುಪ್ಪಳಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕುವೆಂಪು ಅವರ ಶಿಷ್ಯಂದಿರು ಮಂಡಿಸಿದ ಪ್ರಬಂಧಗಳ ಸಂಕಲನ


ರಸಋಷಿ ಕುವೆಂಪು: ಕುವೆಂಪು ಅವರನ್ನು ಹಾಗೂ ಅವರನ್ನು ರೂಪಿಸಿದ ಪರಿಸರವನ್ನು ಕುರಿತಂತೆ ಸಿದ್ಧಪಡಿಸಿರುವ ಈ ಕಿರುಚಿತ್ರದ ಡಿ.ವಿ.ಡಿ., ಕವಿಯ ಬಗೆಗೆ ಹಲವಾರು ಮಾಹಿತಿಗಳನ್ನು ಒದಗಿಸುತ್ತದೆ.