Click here to get directions and assistance from one of our representatives. For more information:

   
     Call 24 Hours: 9900571986

ಟ್ರಸ್ಟ್ ಬಗ್ಗೆ   arrow

ತಮ್ಮ ಬದುಕಿನುದುಕ್ಕೂ ವಿಚಾರ ಕ್ರಾಂತಿಯ ಕಹಳೆಯನ್ನೂದಿ ಕನ್ನಡಿಗರಲ್ಲಿ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವದರ ಜೊತೆಗೆ, ವೈಚಾರಿಕ ದೀಪವನ್ನು ಬೆಳಗಿದವರು ಕುವೆಂಪು.

‘ಕುವೆಂಪು’ ಕಾವ್ಯನಾಮದಿಂದ ಜನಪ್ರಸಿದ್ಧರಾದ ಕೆ.ವಿ. ಪುಟ್ಟಪ್ಪ (29.12.1904-11.11.1994) ಅವರ ಮಾತು, ಕೃತಿಗಳು, ತಾತ್ವಿಕ ಚಿಂತನೆಗಳು ಕನ್ನಡಿಗರಿಗೆ ನಿತ್ಯ ದಾರಿದೀಪಗಳಗಿವೆ. ಅವರ ಆಶಯಗಳನ್ನು, ಕಂಡರಿಸಿದ ಕನಸುಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ, ಕುವೆಂಪು ಅವರು ಬದುಕಿದ್ದಾಗಲೇ, ಅಂದರೆ 1992ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪನವರ ಹಂಬಲ ಮತ್ತು ಪ್ರೋತ್ಸಾಹದಿಂದ ಕುವೆಂಪು ಟ್ರಸ್ಟ್ ರಚನೆಯಾಯಿತು.

ಪ್ರತಿಷ್ಠಾನದಲ್ಲಿ ನಾಡೋಜ ದೇ. ಜವರೇಗೌಡ, ಶ್ರೀ ಡಿ.ಬಿ. ಚಂದ್ರೇಗೌಡ, ಶ್ರೀ ಕಾಗೋಡು ತಿಮ್ಮಪ್ಪ, ನಾಡೋಜ ಕಮಲಾ ಹಂಪನಾ ಹಾಗೂ ನಾಡೋಜ ಹಂ.ಪ. ನಾಗರಾಜಯ್ಯನವರು ಸ್ಥಾಪಕ ಟ್ರಸ್ಟಿಗಳಾಗಿದ್ದರು.

ನಾಡೋಜ ದೇ. ಜವರೇಗೌಡ ಹಾಗೂ ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ್ ಅವರು ಟ್ರಸ್ಟಿನ ವಿಶ್ರಾಂತ ಅಧ್ಯಕ್ಷರುಗಳಾಗಿದ್ದಾರೆ. ಅವರ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀ ವೈ.ಕೆ. ಮುದ್ದು ಕೃಷ್ಣ ಅವರು ಸ್ವಲ್ಪ ಕಾಲ ಅಧ್ಯಕ್ಷರಾಗಿದ್ದರು. ಪ್ರಸ್ತುತ ನಾಡೋಜ ಹಂ.ಪ. ನಾಗರಾಜಯ್ಯನವರು ಅಧ್ಯಕ್ಷರಾಗಿದ್ದಾರೆ.

ಆರಂಭದಲ್ಲಿ ಪ್ರೊ. ಎಚ್.ಜೆ. ಲಕ್ಕಪ್ಪಗೌಡ, ಅವರ ನಂತರ ಡಾ. ಎಚ್.ಡಿ. ಚಂದ್ರಪ್ಪಗೌಡರು ಸಮಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಶ್ರೀ ಕಡಿದಾಳ್ ಪ್ರಕಾಶ ಅವರು ಸಮಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀ ಕೊಳಾವರ ಕೆ.ಟಿ. ನಾರಾಯಣಮೂರ್ತಿಯವರು ಆರಂಭಿಕ ಖಜಾಂಚಿಗಳಾಗಿದ್ದರೆ, ಪ್ರಸ್ತುತ ಶ್ರೀ ದೇವಂಗಿ ಮನುದೇವ್ ಆ ಸ್ಥಾನವನ್ನು ತುಂಬಿದ್ದಾರೆ.

ಟ್ರಸ್ಟಿಗೆ ಉಪಾಧ್ಯಕ್ಷರಾಗಿ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳು, ಕಾರ್ಯದರ್ಶಿಗಳಾಗಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳು ವಿಶೇಷ ಆಹ್ವಾನಿತರಾಗಿದ್ದಾರೆ. ಇವರುಗಳಲ್ಲದೆ ಹಲವಾರು ವಿದ್ವಾಂಸರು, ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ಸದಸ್ಯರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.