Click here to get directions and assistance from one of our representatives. For more information:

   
     Call 24 Hours: 9900571986

ಕುಪ್ಪಳಿಯ ಸುತ್ತಮುತ್ತ   arrow

ಕವಿಮನೆ

kavimaneಕುಪ್ಪಳಿಯ ಪ್ರಧಾನ ಆಕರ್ಷಣೆ ಕವಿಮನೆ. ಕವಿ ಹುಟ್ಟಿ ಬೆಳದ, ಸುಮಾರು ಮೂರು ಶತಮಾನಗಳ ಪ್ರಾಚೀನತೆಯನ್ನು ಹೊಂದಿರುವ ಮೂಲಮನೆಯನ್ನು ಸ್ವಾಧೀನಕ್ಕೆ ಪಡೆದ ಪ್ರತಿಷ್ಠಾನವು ಅದರ ಮೂಲ ಸ್ವರೂಪವನ್ನು ಉಳಿಸಿಕೊಂಡು ಪುನಶ್ಚೇತನಗೊಳಿಸಿದೆ. ಕವಿಯ ಎಲ್ಲ ನೆನಪುಗಳನ್ನು ಕಟ್ಟಿಕೊಡುವ ಜೊತೆಗೆ ಕವಿಮನೆಯನ್ನು ಮಲೆನಾಡಿನ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸುವ ಪೋಟೋ ಗ್ಯಾಲರಿ ಕವಿಮನೆಯ ಭಾಗವಾಗಿದೆ. ಕವಿ ಉಪಯೋಗಿಸುತ್ತಿದ್ದ ವಸ್ತುಗಳು, ಪಡೆದ ಪ್ರಶಸ್ತಿಗಳು, ಸ್ಮರಣಿಕೆಗಳು, ಕೃತಿಗಳ ಪ್ರಥಮಾವೃತ್ತಿಯ ಪ್ರತಿಗಳನ್ನು ಅತ್ಯಂತ ಸುಸಜ್ಜಿತವಾಗಿ ಪ್ರದರ್ಶಿಸಲಾಗಿದೆ. ಪ್ರತಿ ವರ್ಷ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು, ಶಾಲಾಮಕ್ಕಳು ಇಲ್ಲಿ ಭೆಟಿ ನೀಡುತ್ತಾರೆ!


ಕವಿಶೈಲ

5ಕವಿಮನೆಯ ತೆಂಕಣ ದಿಕ್ಕಿಗೆ, ಮನೆಗೆ ಅಂಟಿಕೊಂಡಂತೇ ಇರುವ ಒಂದು ಗುಡ್ಡ. ಬಾಲಕ ಪುಟ್ಟಪ್ಪ ಕವಿಯಾಗಿ ರೂಪಗೊಳ್ಳಲು ಅತ್ಯಮೂಲ್ಯ ಕಾಣಿಕೆ ನೀಡಿದ ಸ್ಥಳ. ಮೊದಲಿಗೆ ಇದನ್ನು ದಿಬ್ಬಣದಕಲ್ಲು ಎಂದು ಕರೆಯಲಾಗುತ್ತಿತ್ತು. ಸ್ವತಃ ಕವಿಯಿಂದಲೇ ‘ಕವಿಶೈಲ’ ಎಂದು ಹೆಸರು ಪಡೆದು ಪ್ರಸಿದ್ಧವಾಗಿದೆ. ಅದರ ಆಸರೆಯಲ್ಲಿರುವ ಅರೆಯ ಮೇಲೆ ಕುಳಿತು ಇಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವುದು ಒಂದು ಅದ್ಭುತ. ಅಲ್ಲಿಯ ಬಂಡೆಯೊಂದರ ಮೇಲೆ ಕುವೆಂಪು, ಬಿ.ಎಂ.ಶ್ರೀ., ಟಿ.ಎಸ್. ವೆಂಕಣ್ನಯ್ಯ ಮೊದಲಾದ ಸಾಹಿತ್ಯ ದಿಗ್ಗಜರಾ ಹಸ್ತಾಕ್ಷರಗಳಿವೆ.

ಕುವೆಂಪು ಅವರ ಮೇಲೆ ಗಾಢ ಪ್ರಭಾವ ಬೀರಿದ ಕವಿಶೈಲದಲ್ಲಿ ಈಗ ಅವರ ಸಮಾಧಿಯಿದೆ. ಪ್ರತಿಷ್ಠಾನವು ಕವಿಗೆಂದು ಸ್ಮಾರಕ ನಿರ್ನಿಸಿದೆ. ಕವಿಯ ಭವ್ಯ ಕಲ್ಪನೆಗಳನ್ನು ಹಿಡಿದಿಡುವ ರೀತಿಯಲ್ಲಿ ಬೃಹತ್ ಶಿಲಾಸ್ತಂಭಗಳ ವಿನ್ಯಾಸವನ್ನು ಹೆಣೆದು, ನಾಡಿನ ಖ್ಯಾತ ಕಲಾವಿದ ಶ್ರೀ ಕೆ.ಟಿ. ಶಿವಪ್ರಸಾದರು ಸ್ಮಾರಕವನ್ನು ರೂಪಿಸಿದ್ದಾರೆ. ಕವಿಪ್ರಿಯರಿಗೂ, ಕಲಾಪ್ರಿಯರಿಗೂ ಅದೀಗ ಮೆಚ್ಚಿನ ತಾಣ.


ಶತಮಾನೋತ್ಸವ ಸ್ಮಾರಕ ಭವನ

8ಕುವೆಂಪು ಅವರ ಜನ್ಮ ಶತಮಾನೋತ್ಸವದ ಸ್ಮರಣೆಗಾಗಿ ಪ್ರತಿಷ್ಠಾನವು 2004ರಲ್ಲಿ ಕುವೆಂಪು ಜನ್ಮಶತಮಾನೋತ್ಸವ ಸ್ಮಾರಕವನ್ನು ನಿರ್ಮಿಸಿತು. ಅದು ಈಗ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತನೆಯಾಗಿದೆ. ಸುಸಜ್ಜಿತ ರಂಗವೇದಿಕೆ, ಬೆಳಕಿನ ವ್ಯವಸ್ಥೆ, ಆಸನ ವ್ಯವಸ್ಥೆಯಿಂದ ಕೂಡಿದೆ. (ಹೇಮಾಂಗಣ) ಅತ್ಯಾಧುನಿಕ ಮಲ್ಟಿಮೀಡಿಯಾ ವ್ಯವಸ್ಥೆಯಿದೆ. ಆಹ್ವಾನಿತರು ಉಳಿದುಕೊಳ್ಳಲು ವಸತಿ ಕೊಠಡಿಗಳು, ಡಾರಮೆಟರಿಗಳು, ಭೋಜನಾಲಯಗಳಿವೆ. ಭವನದ ಮುಂಭಾಗದಲ್ಲಿ ಬಯಲು ರಂಗಮಂದಿರವಿದೆ.ಶತಮಾನೋತ್ಸವದ ಹಿಂದೆ, ಕೂಗಳತೆಯ ದೂರದಲ್ಲಿ ಶ್ರೀ ತೇಜಸ್ವಿಯವರ ಸಮಾಧಿಯಿದ್ದು, ಅದನ್ನು ತೇಜಸ್ವಿ ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗಿದೆ.


ಕಲಾಗ್ಯಾಲರಿ

art galleryಶತಮಾನೋತ್ಸವ ಭವನದ ಪಕ್ಕದಲ್ಲಿಯೇ ‘ಕಲಾಗ್ಯಾಲರಿಕಲಾನಿಕೇತನ ನಿರ್ಮಿಸಲಾಗಿದ್ದು, ಅಲ್ಲಿ ಕುವೆಂಪು ಅವರ ಸಾಹಿತ್ಯ ಕೃತಿಗಳ ಆಶಯಗಳನ್ನು ಬಿಂಬಿಸುವ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ತೆಗೆದ ಹಕ್ಕಿ ಚಿತ್ರಗಳನ್ನು, ವಿಶೇಷ ಪೋಟೋಗಳನ್ನು, ಪೇಂಟಿಂಗುಗಳನ್ನು ಪ್ರದರ್ಶಿಸಲಾಗಿದೆ. ಕಾನೂರು ಹೆಗ್ಗಡಿತಿ ಕಾದಂಬರಿಯ ‘ಸುಬ್ಬಮ್ಮ’ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿ ‘ನಾಯಿಗುತ್ತಿ’ ಪಾತ್ರಗಳ ಆಳೆತ್ತರದ ಶಿಲ್ಪಗಳು ಇಲ್ಲಿನ ಆಕರ್ಷಣೆಯಾಗಿವೆ.


ಸಂಜೆಗಿರಿ

ಸಂಜೆಗಿರಿಕವಿಶೈಲದಿಂದ ಮೇಲಿರುವ ಮಲೆಯ ನೆತ್ತಿಯೇ ‘ಸಂಜೆಗಿರಿ’ ಅಲ್ಲಿ ನಿಂತು ನೋಡಿದರೆ ಮಾಲೆಮಾಲೆಯಾಗಿ ಕಾಣುವ ಸಹ್ಯಾದ್ರಿ ಗಿರಿಪಂಕ್ತಿಗಳು ಕುವೆಂಪು ಅವರಿಗೆ ಸ್ಫೂರ್ತಿಯ ಸೆಲೆಯಾಗಿದ್ದುವು. ಅವರ ಸಾಹಿತ್ಯದಲ್ಲೆಲ್ಲಾ ಆ ಸೌಂದರ್ಯದ ಪ್ರಭಾವವನ್ನು ಕಾಣಬಹುದಾಗಿದೆ. ಈ ಸ್ಥಳವನ್ನು ಕುರಿತ ಸಂಜೆಗಿರಿಯಲಿ ಸಂಜೆ ಎಂಬ ಸಾನಟ್ ಇಲ್ಲಿನ ಸೌಂದರ್ಯವನ್ನು ಕವಿ ಸೆರೆ ಹಿಡಿದಿದ್ದಾರೆ.

 

 


ಹಿರಿಕೊಡಿಗೆ

ಕುಪ್ಪಳಿಯಿಂದ ಐದಾರು ಕಿ.ಮೀ. ದೂರದಲ್ಲಿ, ಕೊಪ್ಪ-ತೀರ್ಥಹಳ್ಳಿ ರಸ್ತೆಯ ಬದಿಗಿರುವ ಈ ಹಳ್ಳಿ ಕುವೆಂಪು ಅವರ ತಾಯಿಯ ತವರು ಮನೆ. ಕುವೆಂಪು ಜನ್ಮ ತಾಳಿದ್ದು ಇಲ್ಲಿಯೆ. ಕವಿ ಭೂಸ್ಪರ್ಶ ಮಾಡಿದ ಜಾಗದಲ್ಲಿ, ಅಲಿಗೆ ಪುಟ್ಟಯ್ಯನಾಯಕರಂತಹ ಹಿರಿಯರ ಆಸಕ್ತಿಯ ಮೇರೆಗೆ ಕವಿಗೆ ಸ್ಮಾರಕವನ್ನು ನಿರ್ಮಿಸಲಾಗಿತ್ತು. ದಿನಾಂಕ 17.01.2017ರ ರಾಜ್ಯ ಸರ್ಕಾರದ ಆದೇಶದ ಮೇರೆಗೆ, ಇದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿಗೆ ಹಸ್ತಾಂತರಗೊಂಡಿದೆ.

ಈಗ ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ಸ್ಮಾರಕ ಹಿರೇಕೊಡಿಯನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸಲಾಗಿದೆ. ಸ್ಮಾರಕ, ಕಲಾ ಮತ್ತು ಫೋಟೋ ಗ್ಯಾಲರಿಗಳಲ್ಲದೆ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

 

 

 


ನವಿಲುಕಲ್ಲು

5 Navilukalluಕುಪ್ಪಳಿ ಹತ್ತಿರದ ಊರು ಇಂಗ್ಲಾದಿಯಿಂದ ಎರಡೂವರೆ ಮೈಲಿ ದೂರದಲ್ಲಿರುವುದು ನವಿಲುಕಲ್ಲು ಗುಡ್ಡ. ಸುತ್ತಮುತ್ತಣ ಕಾಡುಗಳಲ್ಲಿರುವ ನವಿಲುಗಳು ಬಂದು ಆ ಶಿಲಾ ಶಿಖರದಲ್ಲಿ ವಿಹರಿಸುವುದರಿಂದ ಈ ಹೆಸರು. ಆ ಗುಡ್ಡದ ನೆತ್ತಿಯ ಮೇಲೆ ನಿಂತು ನೋಡಿದರೆ ಸುತ್ತಲೂ ದೂರದ ಗಿರಿಪಂಕ್ತಿಗಳ ವೃತ್ತಾಕಾರ ಗೋಚರಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಕಾಡುವ ಕಣಿವೆಗಳ ನಡುವೆ ಬಳುಕಿ ಹರಿಯುವ ತುಂಗಾನದಿಯ ದೃಶ್ಯವಂತೂ ಅದ್ಭುತ. ನವಿಲು ಕಲ್ಲಿನಿಂದ ಕಾಣುವ ಸೂರ್ಯೋದಯದ ವರ್ಣವೈಭವ ಕವಿಗೆ ಬಹಳ ಅಚ್ಚುಮೆಚ್ಚು. ಅಲ್ಲಿ ಅವರು ಕಂಡ ದರ್ಶನ ಹಲವಾರು ಗದ್ಯ ಮತ್ತು ಪದ್ಯಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಅಂತಹ ಸೂರ್ಯೋದವನ್ನು ವೀಕ್ಷಿಸಲು ಬೆಳಗಿನ ಜಾವ ಐದು ಗಂಟೆಗೆ ಅಲ್ಲಿ ಹಾಜರಿರಬೇಕಾಗುತ್ತದೆ. ಅಷ್ಟು ಮುಂಜಾನೆ ಅಲ್ಲಿಗೆ ಟ್ರಕಿಂಗ್ ಹೋಗುವುದು ಇಲ್ಲಿಗೆ ಬೇಟಿ ನೀಡುಗ ಸಹೃದಯರಿಗೆ ಒಂದು ವಿಶೇಷ ಅನುಭವ ನೀಡುತ್ತದೆ.


ಸಿಬ್ಬಲುಗುಡ್ಡೆ

sibbaluguddeತೀರ್ಥಹಳ್ಳಿಯಿಂದ ಸುಮಾರು ಎರಡೂವರೆ ಮೈಲಿ ದೂರದಲ್ಲಿ ಮೇಳಿಗೆ ಎಂಬ ಹಳ್ಳಿ. ಅಲ್ಲಿಂದ ಒಂದೂವರೆ ಮೈಲಿ ಕಾಡಿನ ಕಾಲುದಾರಿಯಲ್ಲಿ ನಡೆದು ಹೋದರೆ ಸಿಬ್ಬಲುಗುಡ್ಡೆ ಸಿಕ್ಕುತ್ತದೆ. (ನವಿಲುಕಲ್ಲಿನಿಂದ ಅನತಿ ದೂರದಲ್ಲಿಯೇ ಇದೆ) ಈ ಸ್ಥಳ ಹಳ್ಳಿಯೂ ಅಲ್ಲ, ಊರೂ ಅಲ್ಲ. ಅಲ್ಲಿ ಇರುವುದೊಂದೇ ಕಟ್ಟಡ: ಗುಡಿಸಲಿನಂತೆ ತೋರುವ ಗಣೇಶನ ಗುಡಿ. ಅಲ್ಲಿಯೆ ಗುಡಿಯ ಅರ್ಚಕ. ಬೇರೆ ಮನೆಗಳಿಲ್ಲ, ಜನವಿಲ್ಲ.

ಗುಡಿಯ ಹಿಂದೆ ನಿಬಿಡ ನಿರ್ಜನಾರಣ್ಯಗಳ ನಡುವೆ ಹರಿಯುವ ತುಂಗೆ. ಆಚೆ ದಡದಲ್ಲಿ ತುಸು ಹಳದಿ ಬಣ್ಣದ ಬಿಳಿಯ ಮಳಲ ರಾಶಿ, ಅದರಂಚಿನಲ್ಲಿ ಹಚ್ಚ ಹಸುರಿನ ವನಪಂಕ್ತಿ. ಗುಡಿಯ ಹಿಂಭಾಗದ ನೀರಿನಲ್ಲಿ ನಿರ್ಭೀತಿಯಿಂದ ಚಲಿಸುವ ದೊಡ್ಡ ದೊಡ್ಡ ಮೀನು. ಈ ದೇವರ ಮೀನುಗಳನ್ನು ಯಾರೂ ಹಿಡಿಯುವುದಿಲ್ಲ. ಬೆಳಗಿನ ಜಾವ ನವಿಲುಕಲ್ಲಿಗೆ ಹೋಗಿ ಸೂರ್ಯೋದಯವನ್ನು ನೋಡಿ, ಬಿಸಿಲ ವೇಳೆಗೆ ಹಿಂದಿರುಗಿ ಬರುವಾಗ, ಸಿಬ್ಬಲುಗುಡ್ಡೆಯಲ್ಲಿ ನಿಂತು, ಹೊಳೆಯಲ್ಲಿ ಮಿಂದು, ಗಣೇಶನಿಗೆ ನಮಸ್ಕಾರ ಹಾಕಿ, ಮೀನುಗಳಿಗೆ ಪುರಿ ಎರಚಿ ಅವುಗಳಾಟ ನೋಡಿ ಆಯಾಸ ಕಳೆಯಲು ಅನುಕೂಲವಾದ ಅರಣ್ಯ ನಿಲ್ದಾಣ.

ಇಲ್ಲಿ ನೀರಿನಲ್ಲಿ ತೇಲುತ್ತಿರುವಾಗಲೇ, ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಯ ಹಿಂಡು ಕವಿಗೆ ದೇವರು ರುಜು ಮಾಡಿರುವಂತೆ ಕಂಡಿದ್ದು! ‘ಸಿಬ್ಬಲುಗುಡ್ಡೆ‘ ಎಂಬ ಸಾನೆಟ್ ಇಲ್ಲಿಯ ಸೌಂದರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


ಅಶೋಕವನ

ಅಶೋಕಕುವೆಂಪು ಅವರ ಹಳ್ಳಿ ಕುಪ್ಪಳಿಯಿಂದ ಎದುರಿಗಿರುವ ಪರ್ವತಶ್ರೇಣಿಯ ಶಿಖರಸ್ಥಾನದಲ್ಲಿ, ಹಳ್ಳಿಯಿಂದ ಸುಮಾರು ಎರಡೂವರೆ ಮೈಲಿ ದೂರದಲ್ಲಿರುವ ವನಸ್ಥಳ. ಕವಿಗೆ ಅತ್ಯಂತ ಇಷ್ಟವಾದ ಜಾಗ. ಅಶೋಕವನದಲ್ಲಿ ಮತ್ತು ಅಶೋಕದ ಹೂಗೊಂಚಲು ಎಂಬ ಎರಡು ಸಾನೆಟ್ಟುಗಳು ಇಲ್ಲಿನ ಸೌಂದರ್ಯಕ್ಕೆ ಸಾಕ್ಷಿಯಾಗಿವೆ.

 

 


ಅಂಚೆಮನೆಯ ಅರೆಕಲ್ಲು

ಅಂಚೆಮನೆಯ ಅರೆಕಲ್ಲಿನಲಿಕುಪ್ಪಳಿಯಿಂದ ಸುಮಾರು ಒಂದೂವರೆ ಮೈಲಿ ದೂರದಲ್ಲಿ ಕಾಡುದಾರಿಯ ನಡುವೆ ಇರುವ ಹಳ್ಳದ ಹಾಸು ಬಂಡೆಗಳು. ಈ ಹಾಸುಬಂಡೆಗಳ ಮೇಲೆ ಹಾಯಾಗಿ ಕುಳಿತೋ ಮಲಗಿಯೋ ಒಮ್ಮೆ ನೀಲಿಬಾನಿನ ಕಡೆ ಕಣ್ಣುತಿರುಗಿಸುತ್ತ, ಇನ್ನೊಮ್ಮೆ ಹಸುರುಕಾನನದ ಕಡೆ ದರಷ್ಟಿ ಹೊರಳಿಸುತ್ತ, ತೊರತೆಯ ಜುಳುಜುಳು ನಿನದಕ್ಕೆ ಕಿವಿಗೊಟ್ಟು ನಿಶ್ಚಿಂತೆಯಾಗಿ ಕಾಲಕಳೆಯಬಹುದಾದ ತಾಣ. ಅಂಚೆಮನೆಯ ಅರೆಕಲ್ಲಿನಲಿ ಎಂಬ ಸಾನೆಟ್ ಇಲ್ಲಿನ ದೃಶ್ಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.

 

 


ಕುಪ್ಪಳಿ ಸುತ್ತಿನ ಪ್ರವಾಸಿತಾಣಗಳಿಗೆ ಕುಪ್ಪಳಿಯಿಂದ ಇರುವ ಅಂತರ

ಅಂಬುತೀರ್ಥ (ಶರಾವತಿ ನದಿಯ ಉಗಮಸ್ಥಳ)  – 33.9 ಕಿ.ಮೀ.

ಆಗುಂಬೆ  – 48.6 ಕಿ.ಮೀ.

ಕವಲೆದುರ್ಗ – 34.5 ಕಿ.ಮೀ.

ಕುಂದಾದ್ರಿ  – 43.6 ಕಿ.ಮೀ.

ಕುವೆಂಪು ವಿಶ್ವವಿದ್ಯಾನಿಲಯ  – 73.1 ಕಿ.ಮೀ.

ಕೊಡಚಾದ್ರಿ  – 82.9 ಕಿ.ಮೀ.

ಕೊಪ್ಪ  – 11.6 ಕಿ.ಮೀ.

ಮಂಡಗದ್ದೆ (ಪಕ್ಷಿಧಾಮ)  – 47.2 ಕಿ.ಮೀ.

ತೀರ್ಥಹಳ್ಳಿ  – 16.7 ಕಿ.ಮೀ.

ಶಿವಮೊಗ್ಗ  – 77.4 ಕಿ.ಮೀ.

ಶೃಂಗೇರಿ  – 38.7 ಕಿ.ಮೀ.

ಸಕ್ರೆಬೈಲು (ಆನೆ ಕ್ಯಾಂಪ್)  – 63.7 ಕಿ.ಮೀ.

ಹುಲಿಕಲ್ಲು  – 56.0 ಕಿ.ಮೀ.